ಐದಾರು ದಶಕಗಳ ಹಿಂದೆ ಬಯಲು ಸೀಮೆಯ ಹಳ್ಳಿಯಲ್ಲಿ ಹುಟ್ಟಿ ಬೆಳದವರಿಗೆ ರಾತ್ರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೀವಿಗಳು –ಚೇಳು, ಕ್ರಿಮಿಕೀಟ, ಹಾವು, ಕಪ್ಪೆ, ಶಬ್ದವಿಲ್ಲದೆ ಹಾರಿ ಹೋಗುತ್ತಿದ್ದ ಗೂಬೆಯ ನೆರಳುಗಳು; ಗದ್ದೆಗೆ ನೀರು ಹಾಯಿಸಲೋ, ಹತ್ತಾರು ಮೈಲು ದೂರದ ಪಟ್ಟಣಕ್ಕೆ ಬರುತ್ತಿದ್ದ ಬಸ್ಸನ್ನು ಹಿಡಿಯಲೋ, ಅಥವಾ ರಾತ್ರಿಯಷ್ಟೆ ನಡೆಯುತ್ತಿದ್ದ ಹೊಸದಾಗಿ ಆರಂಭಗೊಂಡ ಭತ್ತದ -ಹಿಟ್ಟಿನ ಗಿರಣಿಗೋ, ನಾಟಕ-ಹಬ್ಬಗಳಿಗೆ ಊರಿಂದೂರಿಗೆ ನಡೆದೇ ಹೋಗುತ್ತಿದ್ದಾಗ ಕೇಳುಬರುತ್ತಿದ್ದ ಅಧೀರನನ್ನಾಗಿಸುವ ವಿವಿಧ ಗೂಬೆಯ ಕೂಗುಗಳು (ಮುಂದಿನ ವರುಷಗಳಲ್ಲಿ ತಿಳಿದದ್ದು) – ಜೊತೆಯಲ್ಲಿದ್ದ ದೊಡ್ಡವರು ಅದನ್ನು ಹೆಂಗಸು ಅಳುತ್ತಿರುವಂತೆಯೂ, ಯಾರೋ ತೊಂದರೆಯಲ್ಲಿದ್ದರೆ ಮಾಡುವ ನರಳಾಟದ ಆರ್ತನಾದದಂತಿದ್ದು ನಮ್ಮನ್ನು ಸೆಳೆಯಲು ದೆವ್ವ ಭೂತಗಳು ನಡೆಸುವ ಕರಾಮತ್ತೆಂದು ಹೇಳುತ್ತಿದ್ದರು. ಈಗ ನೆನಪಿಸಿಕೊಂಡರೆ, ಆ ಲೋಕ ಮರುಸೃಷ್ಟಿಯಾಗಬಾರದೇ ಎನಿಸುತ್ತದೆ!
ಬುಡುಬುಡಿಕೆಯನ್ನು ಅಳ್ಳಾಡಿಸುತ್ತಾ, ‘ಹಾಲಕ್ಕಿ ನುಡಿದೈತೆ’ ಎಂದೆನ್ನುತ್ತಾ ಕಣಿ ಶಾಸ್ತ್ರವನ್ನು ಹೇಳಲು ಅನಿರೀಕ್ಷಿತವಾಗಿ ಮನೆಯ ಬಾಗಿಲಿಗೆ ಬರುತ್ತಿದ್ದ ಬುಡುಬುಡಿಕೆ ದಾಸರು ಮುಂದೆ ನಡೆಯ ಬಹುದಾದ ಒಳ್ಳೆಯದನ್ನು -ಕೆಟ್ಟದನ್ನು ಹೇಳುತ್ತಿದ್ದರು. ಇವರು ಹಾಲಕ್ಕಿಯ ಕೀಚು ಕೂಗನ್ನು ಅರ್ಥಮಾಡಿಕೊಳ್ಳುವರಾಗಿದ್ದು(!) ಗೂಬೆಗಳು ನಮ್ಮ ಬಗ್ಗೆ ಮಾತಾಡಿದ್ದನ್ನು ಕೇಳಿಸಿಕೊಂಡು ಭವಿಷ್ಯವನ್ನು ಮುಂಚೆಯೇ ತಿಳಿಸುತ್ತಿದ್ದರು. ಇಂದಿನ ಟೀವಿ ಲೋಕಕ್ಕಿಂತ ಉತ್ತಮವಾಗಿತ್ತು!
ಹಗಲಿನ ಬೇಟೆಗಾರ ಭಕ್ಷಕಗಳಿಗಿಂತ ವಿಭಿನ್ನ, ಗೂಬೆ ಲೋಕ. ಗೂಬೆಗಳು ಬೇಟೆಗಾರ ಭಕ್ಷಕಗಳು – ಕೆಲವು ಆಹಾರ ಸರಪಣಿಯ ಅಗ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ನಿಶಾಚರಿ. ಇರುಳು ರಕ್ಷಕ. ರೈತ ಸಮುದಾಯವಿರುವ ಹಳ್ಳಿ ಪ್ರದೇಶಗಳು ಹೊಲ ಗದ್ದೆ ತೋಟಗಳಿಂದಾವರಿಸಿವೆ. ಈ ವ್ಯವಸಾಯ ಪ್ರದೇಶ ಇಲಿ, ಸುಂಡಿಲಿಗಳಂತಹ ದಂಶಕಗಳನ್ನು ಪೋಷಿಸುತ್ತವೆ. ಇವುಗಳು ಬೆಳೆಯುವ ಫಸಲಿಗೆ ಮಾರಕ. ಅಲ್ಲದೆ ಬೆಳೆದ ಫಸಲಿನ ಉಗ್ರಾಣಕ್ಕೂ ಸಹ ಲಗ್ಗೆ ಇಡುತ್ತವೆ. ಫಸಲಿನ ಸಮಯದಲ್ಲಿ ದಂಶಕಗಳ ವಂಶಾಭಿವೃದ್ಧಿಯೂ ಅಧಿಕ ಪಟ್ಟು. ಇವುಗಳಿಂದ ರೋಗಗಳ ಹರಡುವಿಕೆಗೂ ಸಾಧ್ಯತೆ ಇದೆ. ಇವುಗಳನ್ನು ರಾತ್ರಿಯ ಹೊತ್ತಿನಲ್ಲಿ, ನೈಸರ್ಗಿಕವಾಗಿ ನಿಯಂತ್ರಿಸಲು ಕೇವಲ ಬೇಟೆಗಾರ ಗೂಬೆಯಿಂದ ಮಾತ್ರ ಸಾಧ್ಯ. ಅಲ್ಲದೆ ಕೀಟಗಳನ್ನೂ ಭಕ್ಷಿಸಿ ಹತೋಟಿಯಲ್ಲಿಡುತ್ತವೆ. ಅಧಿಕ ಗೂಬೆಗಳಿದ್ದಷ್ಟೂ ಹೆಚ್ಚುವರಿ ಬೆಳೆ, ಅಧಿಕ ವರಮಾನ ರೈತಾಪಿ ವರ್ಗಕ್ಕೆ. ಗೂಬೆಗಳು ನಿಸರ್ಗಕ್ಕೆ ಅನಿವಾರ್ಯ. ಎಲ್ಲಕ್ಕೂ ಮಿಗಿಲಾಗಿ ನೈಸರ್ಗಿಕ ಸಮತೋಲನವನ್ನು ಕಾಪಾಡುವಲ್ಲಿ ಇವುಗಳ ಪಾತ್ರವೂ ಮಹತ್ತರ.
ಕರ್ನಾಟಕದಲ್ಲಿ 15, ಭಾರತದಲ್ಲಿ 36 ಹಾಗೂ ವಿಶ್ವದಾದ್ಯಂತ 216 ಪ್ರಭೇದಗಳ ಗೂಬೆಗಳಿವೆ. ದಕ್ಷಿಣ ಧ್ರುವ, ಗ್ರೀನ್ ಲ್ಯಾಂಡ್ ನಂತಹ ಪ್ರದೇಶವನ್ನು ಹೊರತು ಪಡಿಸಿ ಭೂಮಿಯ ಎಲ್ಲೆಡೆ, ಎಲ್ಲಾ ತರಹದ ನೆಲೆಗಳಲ್ಲಿ ಗೂಬೆಗಳು ಬದುಕಿ ಬಾಳುತ್ತಿವೆ.
- ಗೂಬೆಗಳ ಸಾಮಾನ್ಯ ಹೊರ ರೂಪ ಮತ್ತು ಲಕ್ಷಣಗಳು : ನಿಶಾಚರಿ. ವಂಶಾಭಿವೃದ್ಧಿ ಸಮಯ ಹೊರತು ಪಡಿಸಿದರೆ ಏಕಾಂಗಿ. ಬೇಟೆಗಾರ ಹಕ್ಕಿ. ಬೇರೆಯ ಹಕ್ಕಿಗಳಲ್ಲಿ ಕಾಣಬರದ, ಸಪಾಟು ಮುಖದಲ್ಲಿ ಮುಂದೆ ನೋಡುವಂತಿರುವ ಎರಡು ದೊಡ್ಡ ಕಣ್ಣುಗಳು. ಕುತ್ತಿಗೆಯನ್ನು ಉದ್ದನೆಯ ಸಡಿಲ ಗರಿಗಳು ಆವರಿಸಿರುವುದರಿಂದ ಕತ್ತು ನೀಳವಾಗಿದ್ದರೂ ಗಿಡ್ಡವಾಗಿದ್ದಂತೆ ಕಾಣುತ್ತದೆ. ದೊಡ್ಡ ತಲೆ, ಧೀರ್ಘ ವೃತ್ತಾಕಾರದ ಅಥವಾ ಹೃದಯಾಕಾರದ ಮುಖ. ಗುಂಡಾದ ಹಕ್ಕಿ. ನಿಗರಿದ ಕಿವಿಯಂತೆ ಕಾಣುವ ಕೊಂಬಿನಂತಹ ಗರಿ. ಬಲವಾದ ಸಣ್ಣ ಕೊಕ್ಕು, ಗರಿ ಆವೃತ್ತ ಕಾಲು, ಮೊನಚಾದ ಕಾಲುಗುರು. ಕಣ್ಣಿನ ಮೇಲಿನ ರೆಪ್ಪೆ ದೊಡ್ಡದಿದ್ದು, ಕೊಕ್ಕಿನ ಬುಡದಲ್ಲಿನ ಸಣ್ಣ ಗರಿಗಳು ಮೀಸೆಯಂತಿದೆ. ಹೆಣ್ಣು ಗೂಬೆಗಳು ಗಾತ್ರ ಮತ್ತು ತೂಕದಲ್ಲಿ ಗಂಡಿಗಿಂತ ದೊಡ್ಡವು. ಸ್ಥಳೀಕ ಗೂಬೆಗಳು ಆಹಾರದ ಕೊರತೆಯುಂಟಾಗಾದ ಹೊರತು ತಮ್ಮ ವಾಸ ಸ್ಥಳಗಳನ್ನು ಬಿಟ್ಟು ಬೇರೆಡೆ ಹೋಗುವುದಿಲ್ಲ. ಹೀಗಾಗಿ ತಮ್ಮ ನೆಲೆಯಲ್ಲಿ, ರಾತ್ರಿಯ ಆಹಾರದ ಹುಡುಕಾಟದ ಹಾರಾಟದ ಸಮಯದಲ್ಲಿ ನೆನಪಿನಿಂದ- ಗಿಡ, ಮರ, ಮನೆ, ಕಂಬ ಎಲ್ಲೆಲ್ಲಿ ಏನೇನು ಇದೆಯೆಂಬ ಸ್ಪಷ್ಟ ಅರಿವಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಗಲು ಹೊತ್ತಿನಲ್ಲಿ ಹೊಸದಾಗಿ ಆಗಮಿಸಿದ ಯಾವುದಾದರೂ ಗೂಬೆ ಮರದಲ್ಲಿರುವುದನ್ನು ಗೊತ್ತಾದರೆ ಅಲ್ಲಿ ನೆಲೆಸಿರುವ ಹಕ್ಕಿಗಳು ಕೂಗುತ್ತಾ, ಕರೆಯುತ್ತಾ ಮಿಕ್ಕೆಲ್ಲಾ ಹಕ್ಕಿಗಳ ಗುಂಪು ಕಟ್ಟಿ ದಾಳಿ ನಡೆಸಿ, ಆಗಂತುಕ ಗೂಬೆಯನ್ನು ಓಡಿಸಲು ಶತ ಪ್ರಯತ್ನ ನಡೆಸುತ್ತವೆ.
- ನೆಲೆಸಿರುವ ಪ್ರದೇಶಗಳ ಲಕ್ಷಣಗಳು : ದೊಡ್ಡ ಕಲ್ಲು ಬಂಡೆಗಳ ಮರೆ, ಬಿದುರು ಮೆಳೆ, ಪೊದೆಗಳ ಕೆಳಗೆ, ವಿರಳ ಕಾಡು, ತೋಪು, ದೊಡ್ಡ ಮರಗಳು, ಹೊಲ-ಗದ್ದೆ-ಹುಲ್ಲುಗಾವಲುಗಳ ಅಂಚಿನಲ್ಲಿ, ಮರದ/ಗೋಡೆಗಳ ಪೊಟರೆ - ಬಿರುಕು, ಕಡಿದಾದ ನದಿ, ಕಾಲುವೆಗಳ ದಂಡೆ, ಉಪಯೋಗಿಸಿ ಬಿಟ್ಟ ಗಣಿಗಳು, ಯಾವಾಗಲೂ ನೀರಿನಲ್ಲಿರುವ ಎತ್ತರದ ಸೇತುವೆಗಳು, ಪಾಳು ಬಿದ್ದ ಕಟ್ಟಡಗಳು - ಕೋಟೆ ಕೊತ್ತಲು, ದೇವಸ್ಥಾನ ಸಂಕೀರ್ಣ, ಕೊಳ-ನದಿ-ಸರೋವರಗಳ ಬಳಿ, ಹಾಗೂ ಜನವಸತಿ ಇರುವೆಡೆ (ಹಳ್ಳಿ, ನಗರಗಳು).
- ಆಹಾರ, ಮಿಕಗಳ ಲಭ್ಯತೆ ಹಾಗು ಭಕ್ಷಕಗಳ ನಿಬಿಡತೆ:
- ಹೊಲ-ಗದ್ದೆಯಲ್ಲಿ ಬೆಳೆ ಗಟ್ಟಿ ಕಾಳಾಗುವ ಸಮಯದಲ್ಲಿ ಇಲಿಗಳು ಲಗ್ಗೆ ಇಟ್ಟು ಸಾಕಷ್ಟು ಹಾನಿ ಮಾಡುತ್ತವೆ. ಇಲಿಗಳೂ ಹೆಚ್ಚಿನಂಶ ನಿಶಾಚರಿಗಳು. ರಾತ್ರಿಯ ಹೊತ್ತಿನಲ್ಲಿ ಗೂಬೆಗಳು ಇಲಿಯನ್ನು ಬೇಟೆಯಾಡುವುದರಿಂದ, ಸಂತತಿಯನ್ನು ನಿಯಂತ್ರಿಸಿ ರೈತನಿಗೆ ಹೆಚ್ಚು ಬೆಳೆ ದಕ್ಕುವಂತೆ ಮಾಡುತ್ತವೆ. ಉಗ್ರಾಣಗಳಲ್ಲಿ ಸಹ, ಸಂಗ್ರಹಿಸಿದ ದವಸ ಧಾನ್ಯಗಳನ್ನು ಸಹ ತಿಂದು, ಹಾಳು ಮಾಡುವ ಇಲಿ, ಸುಂಡಿಲಿ, ಹೆಗ್ಗಣಗಳಂತಹ ದಂಶಕಗಳನ್ನು ಬೇಟೆಯಾಡುತ್ತವೆ. ಇವುಗಳಲ್ಲದೆ, ಕಾಡುಗಳಲ್ಲಿನ ಮರ ಇಲಿ, ಮೂಗಿಲಿಗಳನ್ನು ಯಶಸ್ವಿಯಾಗಿ ಬೇಟೆಯಾಡಿ ಸಂಖ್ಯೆಯನ್ನು ನಿಯಂತ್ರಿಸುತ್ತವೆ.
- ಬೆಳೆಗಳಿಗೆ ಲಗ್ಗೆ ಇಡುವ ಜಿರಳೆಯನ್ನು ಒಳಗೊಂಡ ವಿವಿಧ ಕೀಟಗಳು, ಜೇಡ; ಕಪ್ಪೆ, ಓತಿಕ್ಯಾತ, ಹಲ್ಲಿ, ಹಾವು; ಸಣ್ಣ ಹಕ್ಕಿಯಿಂದ ಹಿಡಿದು ಬೆಳವ, ನೀಲಕಂಠ, ಬಿಜ್ಜು, ಗೌಜಲು, ನವಿಲುಗಳಂತಹ ದೊಡ್ಡ ಹಕ್ಕಿಗಳು; ಚಿಟ್ಟಳಿಲು, ಮಲೆನಾಡ ದೊಡ್ಡ ಅಳಿಲು, ಬಾವಲಿ, ಮೊಲದಂತಹ ಪ್ರಾಣಿಗಳು; ಮೀನು, ಮತ್ತು ಏಡಿ ಸಹ ಗೂಬೆಗಳ ಆಹಾರ.
- ವಿವಿಧ ವನ್ಯಜೀವಿಗಳಂತೆಯೇ ಗೂಬೆಗಳ ನಿಬಿಡತೆ ಆಹಾರ (ಮಿಕಗಳ)ದ ಲಭ್ಯತೆಯನ್ನು ಆಧರಿಸಿದೆ. ಆದ್ಯತೆಯ ಬೇಟೆಯ ಲಭ್ಯತೆ ಕಡಿಮೆಯಾದರೆ ಗೂಬೆಯ ನಿಬಿಡತೆಯನ್ನು ನಿಯಂತ್ರಿಸುವುದಿಲ್ಲ, ಏಕೆಂದರೆ ಆಹಾರ ವೈವಿಧ್ಯಮಯವಾದ್ದರಿಂದ, ಪರ್ಯಾಯ ಆಹಾರವನ್ನು ಅವಲಂಬಿಸುತ್ತವೆ. ಉತ್ತರ ಶೀತವಲಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಹಿಮಗೂಬೆಗಳು ಸಂಪೂರ್ಣವಾಗಿ ಲೆಮ್ಮಿಂಗ್ಸ್ ಎಂಬ ಹುಲ್ಲು ತಿನ್ನುವ ದಂಶಕ ಮೇಲೆ ಅವಲಂಬಿತವಾಗಿದ್ದು, ಹುಲ್ಲಿನ ಕ್ಷಾಮವಾದಾಗ ಲೆಮ್ಮಿಂಗ್ಸ್ಗಳ ಸಂಖ್ಯೆ ಕಡಿಮೆಯಾಗಿ ಹಿಮಗೂಬೆಗಳಿಗೆ ಆಹಾರವಿಲ್ಲದಂತಾಗಿ ದಕ್ಷಿಣ ದಿಕ್ಕಿನತ್ತ ಗುಳೆಹೋಗಿ ಅಲ್ಲಿ ದೊರಕುವ ವಿವಿಧ ಇತರೆ ಆಹಾರವನ್ನು ತಿಂದು ಬದುಕುತ್ತವೆ. ಹೀಗಾಗಿ ಹಿಮಗೂಬೆಗಳ ಸಂಖ್ಯಾಸ್ಫೋಟವನ್ನು ಶೀತವಲಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಭೂಭಾಗದಲ್ಲಿ ಆಗಾಗ್ಗೆ ಕಾಣಬಹುದು.
- ನಿಸರ್ಗದಲ್ಲಿ ಗೂಬೆಯೂ ಸಹ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಎಲ್ಲಾ ಭಕ್ಷಕಗಳಂತೆ ಹೆಚ್ಚುವರಿ ಮಿಕ (ಭಕ್ಷ್ಯ) ಗಳನ್ನು ತಿಂದು ಅವುಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿಡುತ್ತವೆ. ಎಲ್ಲಾ ಜೀವಿಗಳು ನೆಲೆ ಬೆಂಬಲಿಸುವುದಕ್ಕಿಂತ, ಸಾಕಲು ಸಾಧ್ಯವಾದುದಕ್ಕಿಂತ ಹೆಚ್ಚಿನ ಸಂತತಿಯನ್ನು ಸೃಷ್ಟಿಸುತ್ತವೆ. ಹೆಚ್ಚುವರಿ ಸಂತತ ಹಸಿವಿನಿಂದ, ಖಾಯಿಲೆಯಿಂದ ಇಲ್ಲವೇ ಬೇಟೆಗೆ ಬಲಿಯಾಗುತ್ತವೆ. ಹಸಿವು ಮತ್ತು ಖಾಯಿಲೆ ಒಟ್ಟಾರೆ ಸಂಖ್ಯೆಯಲ್ಲಿನ ಒಂದೊಂದನ್ನು ಇಲ್ಲವಾಗಿಸಿದರೆ; ಸುಲಭವಾಗಿ ಸಿಗುವ, ನಿಶ್ಯಕ್ತವಾದ ಮತ್ತು ನಿಸರ್ಗದ ತೀವ್ರತೆಗೆ ಹೊಂದಿಕೊಳ್ಳಲಾಗದ ಸಂತತಿ ಬೇಟೆಯಾಡಲ್ಪಡುತ್ತದೆ. ಹೀಗೆ ಭಕ್ಷಕಗಳು, ಮಿಕಗಳ ಸಂತತಿಯ ಆರೋಗ್ಯ ಹಾಗೂ ಬದುಕುವ ಶಕ್ತಿಯನ್ನು ಕಾಪಾಡುವ ಪಾತ್ರವನ್ನು ನಿರ್ವಹಿಸುತ್ತವೆ.
- ಆಹಾರ ಸರಪಣಿಯ ಅಗ್ರ ಸ್ಥಾನದಲ್ಲಿರುವ (ಈ ಗುಂಪಿನಲ್ಲಿ ದೊಡ್ಡ ಗೂಬೆಗಳು ಇವೆ) ಆರೋಗ್ಯವಂತ ಜೀವಿಗಳನ್ನು ನೈಸರ್ಗಿಕವಾಗಿ ಯಾವುದೇ ಜೀವಿ ಬೇಟೆಯಾಡುವುದಿಲ್ಲ. ಆದರೆ, ಸಣ್ಣ ಗೂಬೆಗಳನ್ನು ದೊಡ್ಡ ಗಾತ್ರದ ಗೂಬೆಗಳು ಬೇಟೆಯಾಡುತ್ತವೆ. ಹೀಗಾಗಿ ಸಣ್ಣಗೂಬೆಗಳು ಬಂಡೆ ಅಥವ ಮರದ ಹಿನ್ನೆಲೆಯ ಬಣ್ಣದಂತೆ ಛದ್ಮ ವೇಷಧಾರಿಯಾಗುತ್ತವೆ, ಇದರಿಂದ ದೊಡ್ಡ ಗೂಬೆಗಳಿಗೆ ಮತ್ತು ಹಗಲಿನ ಇತರೆ ಬೇಟೆಗಾರ ಹಕ್ಕಿಗಳಿಗೆ ಸುಳಿವು ಸಿಕ್ಕದಂತೆ ಇರಲು ಸಾಧ್ಯವಿದೆ. ಅಲ್ಲದೆ ರಕ್ಷಣೆಯ ದೃಷ್ಟಿಯಿಂದ, ದೊಡ್ಡ ಗೂಬೆಗಳು ಹಾರಿ ಬರಲು ಸಾಧ್ಯವಿಲ್ಲದಂತಹ ದಟ್ಟಣೆಯ ಪೊದೆ ಮರಗಳ ಸಂಧಿಯಲ್ಲಿ ಠಿಕಾಣಿ ಹೂಡುತ್ತವೆ. ಇಷ್ಟೆಲ್ಲಾ ಎಚ್ಚರ ವಹಿಸಿದರೂ, ವೇಗವಾಗಿ ಹಾರಾಡುವ ಬೇಟೆಗಾರ ಹಿಂಸ್ರ ಪಕ್ಷಿಯಾದ ದೊಡ್ಡ ಚಾಣ (ಪೆರಿಗ್ರಿನ್ ಫಾಲ್ಕನ್) ಸಣ್ಣ ಕೊಂಬಿನ ಗೂಬೆಗಳನ್ನು ಬೇಟೆಯಾಡುತ್ತವೆ.
- ದಕ್ಷ ಕಾರ್ಯಕ್ಷಮತೆಗೆ ಅಂಗಾಂಗಳು ವಿಕಸನಗೊಂಡಿವೆ:
- ಅತಿ ಸೂಕ್ಷ್ಮ ಶಬ್ದವನ್ನು ಗ್ರಹಿಸುವ ಮತ್ತು ಕರಾರುವಕ್ಕಾಗಿ ಬೇಟೆಯಾಡುವ ಸಾಮರ್ಥ್ಯದ ಜೀವಿ ಗೂಬೆ. ರಾತ್ರಿಯ ಹೊತ್ತಿನಲ್ಲಿ ಯಶಸ್ವಿಯಾಗಿ ಬೇಟೆಯಾಡಲು ಅವಶ್ಯವಾದ ಕಣ್ಣು ಮತ್ತು ಕಿವಿಗಳು ಈ ಜೀವಿಯಲ್ಲಿ ವಿಶಿಷ್ಟವಾಗಿ ವಿಕಸಗೊಂಡಿವೆ, ಆದರೆ ವಾಸನೆಯ ಗ್ರಹಿಸುವಿಕೆ ಚೆನ್ನಾಗಿ ರೂಪುಗೊಂಡಿಲ್ಲ. ಇತರೆ ಹಕ್ಕಿಗಳಂತೆ ಕಣ್ಣುಗಳು ಪಕ್ಕದಲ್ಲಿರದೆ, ಸಪಾಟಾದ ಮುಖದಲ್ಲಿ ಎರಡು ಹಿರಿದಾದ ಕಣ್ಣುಗಳು (ಗಾತ್ರದಲ್ಲಿ ಕೆಲವು ಮಾನವರ ಕಣ್ಣಿಗಿಂತ 14 ಪಟ್ಟು ದೊಡ್ಡದು) ಮುಂದೆ ನೋಡುವಂತಿರುತ್ತವೆ. ಮುಂದಿರುವ ಕಣ್ಣುಗಳಿಂದಾಗಿ ಗೂಬೆಗೆ ದುರ್ಬೀನಿನಂತಹ ನೋಟ – ವಸ್ತುವಿನ ಉದ್ದ, ಅಗಲ ಮತ್ತು ಎತ್ತರದ ನಿರ್ಧಿಷ್ಟ ನೆಲೆಯನ್ನು ಮೂರು ಆಯಾಮದಿಂದ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. 110 ಡಿಗ್ರಿಯಷ್ಟು ವಿಶಾಲವಾದ ನೋಟ ಕಾಣಬಹುದಾದರೂ, ನಡುವಿನ 70 ಡಿಗ್ರಿ ಮಾತ್ರ ನಿಖರವಾಗಿ ಕಾಣುತ್ತದೆ.
- ಕಣ್ಣು ನೀಳಕೊಳವೆಯಂತಿದ್ದು ಈ ಆಕೃತಿಯಿಂದಾಗಿ ಕಣ್ಣನ್ನು ಕುಳಿಯಲ್ಲಿ ತಿರುಗಿಸಲಾಗುವುದಿಲ್ಲ, ಕೇವಲ ನೇರ ನೋಟವಷ್ಟೆ ಸಾಧ್ಯ. ಹೀಗಾಗಿ ಅತ್ತ ಇತ್ತ ಹಿಂದೆ ನೋಡಲು ಇಡೀ ಕತ್ತನ್ನೇ ತಿರುಗಿಸುತ್ತದೆ (270 ಡಿಗ್ರಿ). ನಾವೇನಾದರು ಹೀಗೆ ಮಾಡ ಹೋದರೆ ಮೆದುಳಿಗೆ ಹೋಗುವ ರಕ್ತನಾಳ ತುಂಡಾಗುತ್ತದೆ. ಗೂಬೆಗಳಲ್ಲಿ ರಕ್ತನಾಳ ಬೆನ್ನೆಲುಬಿನಲ್ಲಿ ಸಾಗುವ ಕೊಳವೆಯಂತಹ ಹಾದಿ ವಿಸ್ತಾರವಾಗಿದ್ದು ನಾಳಗಳು ತಿರುಚಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಮೆದುಳಿನ ರಕ್ತ ಸಂಚಾರಕ್ಕೆ ಅಡೆತಡೆಯಾಗದಂತೆ ನೋಡಿಕೊಳ್ಳಲು ಬೆನ್ನೆಲುಬನ್ನು ದಾಟಿದ ನಂತರ ರಕ್ತದ ಶೇಖರಣೆಯ ವ್ಯವಸ್ಥೆ ಇದೆ. ಮೆದುಳಿಗೆ ಬೇಕಾದ ಕನಿಷ್ಟ ರಕ್ತದ ಅವಶ್ಯಕತೆಯನ್ನು ಮೆದುಳುಗಿಂತ ಮುಂಚಿರುವ ರಕ್ತದ ಸಂಗ್ರಹ ಪೂರೈಸುತ್ತದೆ.
- ಕಣ್ಣಿಗೆ ಪೂರಕವಾಗಿ ಕೆಲವು ಗೂಬೆಗಳ ಕಿವಿಗಳ ಸಾಮರ್ಥ್ಯ ನಮಗಿಂತ ಹತ್ತು ಪಟ್ಟು. ಮುಖಾಕೃತಿಯ ಗರಿಗಳು ಕಣ್ಣಿನ ಪಕ್ಕದಲ್ಲಿರುವ ಕಿವಿಗಳನ್ನು ಮುಚ್ಚಿರುತ್ತವೆ. ಸೂಕ್ಷ್ಮ ಶಬ್ದಗ್ರಹಿಸಿ ಕಿವಿಯತ್ತ ಹರಿಸಲು, ಮುಖಾಕೃತಿಯ ಗರಿಗಳನ್ನು ಡಿಷ್ ಆಂಟೆನಾ ರೀತಿ ಶಬ್ದ ಉಗಮವಾಗುವತ್ತ ಬದಲಿಸುತ್ತವೆ. ಇದು ಮುಖದ ಮಾಂಸಖಂಡಗಳ ಚಲನೆಯಿಂದ ಸಾಧ್ಯ. ಕೆಲ ಗೂಬೆಯ ಕಿವಿಗಳು ಸಮತಲದಲ್ಲಿ ಇರುವುದಿಲ್ಲ, ಬದಲು ಸ್ವಲ್ಪ ಮೇಲೆ ಕೆಳಗೆ ಇದ್ದು, ಮಿಕ ಮಾಡುವ ಅತಿ ಸೂಕ್ಷ್ಮ ಶಬ್ದವನ್ನು ಮತ್ತದರ ಜಾಗವನ್ನು ಕರಾರುವಕ್ಕಾಗಿ ಗ್ರಹಿಸಲು ಸಾಧ್ಯವಾಗಿದೆ. ಗಾಢಾಂಧಕಾರದಲ್ಲೂ, ಹುಲ್ಲಿನ ಮರೆಯಲ್ಲಿ, 2 ಅಡಿ ಎತ್ತರದವರೆಗೆ ಹಿಮ ಆವರಿಸಿದರೂ ಯಶಸ್ವಿಯಾಗಿ ಆಹಾರವನ್ನು ಬೇಟೆಯಾಡುವ ಸಾಮರ್ಥ್ಯವಿದೆ.
- ನೀರವ ರಾತ್ರಿಯಲ್ಲಿ ನಿಶ್ಯಬ್ಧವಾಗಿ, ನಿಧಾನವಾಗಿ ಹಾರಾಡಿ ಬೇಟೆಯಾಡಲು ಸಹಾಯಕವಾಗುವಂತಹ ಅಗಲವಾದ ರೆಕ್ಕೆ ಇದೆ. ಹಾರು ರೆಕ್ಕೆಯ ತುದಿ ವೃತ್ತಾಕಾರವಾಗಿದ್ದು, ಹಾರುಗರಿಗಳು ಮೇಲ್ಬಾಗ ಅತಿ ಮೃದುವಾಗಿದ್ದು, ಎರಡೂ ಅಂಚುಗಳು ಬಾಚಣಿಗೆಯ ಹಲ್ಲಿನಂತಿದ್ದು ಹಾರುವ ಶಬ್ಧ, ಕಂಪನವನ್ನು ಸ್ತಬ್ಧಗೊಳಿಸುತ್ತದೆ. ಇದರಿಂದಾಗಿ ಮಿಕಗಳಿಗೆ ಗೊತ್ತಾಗದಂತೆ ಬೇಟೆಯಾಡಲು ಸಾಧ್ಯವಾಗಿದೆ.
- ಕೆಲ ಗೂಬೆಗಳು ನಾನಾ ಕಾರಣಗಳಿಂದ ಕೆಲವೊಮ್ಮೆ ಹಗಲಿನಲ್ಲೂ ಕಾರ್ಯಶೀಲವಾಗಿರುತ್ತವೆ. ವರ್ಷದ ಕೆಲ ತಿಂಗಳುಗಳು ದಿನವಿಡೀ ಹಗಲು ಇಲ್ಲವೇ ರಾತ್ರಿ ಇರುವಂತಹ ಉತ್ತರಗೋಳದ ಶೀತವಲಯದಲ್ಲಿ ಗೂಬೆಗಳು ಹಗಲಿನಲ್ಲಿ ಬೇಟೆಯಾಡಿ ಆಹಾರ ಸಂಪಾದಿಸಿಕೊಳ್ಳಲೇ ಬೇಕು. ಮರಿಗಳನ್ನು ಬೆಳಸುವ ಸಮಯದಲ್ಲಿ ಬೇಟೆ ಸಾಕಷ್ಟು ಸಿಗದಿದ್ದಾಗ ಮುಂಜಾನೆಯಲ್ಲೂ ಆಹಾರ ಹುಡುಕಬೇಕಾಗುತ್ತದೆ. ಕತ್ತಲೆಯಂತೆ ಹಗಲಿನಲ್ಲೂ ದಕ್ಷವಾಗಿ ಬೇಟೆಯಾಡುತ್ತವೆ. ಚಳಿಗಾಲದಲ್ಲಿ ಬಿಸಿಲು ಕಾಯಿಸಿಕೊಳ್ಳಲು ಹೊರಬರಬೇಕು. ಗೂಬೆಗಳು ಮರಿಗಳನ್ನು ಬೆಳಸುವ ಸಮಯದಲ್ಲಿ ಯಾ ಹಗಲಿನಲ್ಲಿ ನಿದ್ರೆಯಲ್ಲಿದ್ದರೂ ಸುತ್ತಲಿನ ಆಗುಹೋಗುಗಳ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ. ಅವಶ್ಯಕತೆಬಿದ್ದಾಗ ಕಣ್ತೆರದು ನೋಡುತ್ತವೆ. ಹಗಲಿನಲ್ಲಿ ಪ್ರಖರ ಬೆಳಕಿಗೆ ನಮ್ಮ ಕಣ್ಣಿನ ಪಾಪೆ ಕಿರುದಾಗುವ ಅನುಕೂಲವಿದೆ, ಈ ವ್ಯಾಪಕ ಹೊಂದಾಣಿಕೆ ಗೂಬೆಗಳಿಗೂ ಸಾಧ್ಯ. ಕೆಲವು ಗೂಬೆಗಳು ಮೇಲಿನ ರೆಪ್ಪೆಯನ್ನು ಎಷ್ಟು ಬೇಕೋ ಅಷ್ಟನ್ನು ಮುಚ್ಚಿ ಕಡಿಮೆ ಬೆಳಕನ್ನು ಕಣ್ಣಿನೊಳಕ್ಕೆ ಹಾಯಿಸಿ ನೋಡುತ್ತವೆ. ಹೀಗಾಗಿ, ಗೂಬೆಗಳು ಹಗಲಿನಲ್ಲಿ ನಿದ್ದೆ ಮಾಡುವಂತೆ ಕಂಡರೂ ಎಚ್ಚರದಿಂದಿರುತ್ತವೆ. ಗೂಬೆಗಳು ನಿದ್ರೆಯಲ್ಲಿ ಕೆಲರೆಪ್ಪೆಯನ್ನು ಮುಚ್ಚುತ್ತವೆ. ಬೇರೆ ಸಮಯದಲ್ಲಿಯ ಮೇಲಿನ ರೆಪ್ಪೆಯನ್ನು ಮುಚ್ಚಿ ತೆರೆದು ಮಾಡುತ್ತವೆ. ಅಲ್ಲದೆ ತೆಳು ಅರೆ-ಪಾರದರ್ಶಕ ಪೊರೆಯೊಂದು ಧೂಳು, ಜೋರು ಗಾಳಿಯಿಂದ ಕಣ್ಣಿಗೆ ರಕ್ಷಣೆ ನೀಡುತ್ತದೆ, ಈ ರಕ್ಷಣಾ ಪೊರೆ ವೇಗವಾಗಿ ಹಾರಾಡುವ ಬೇಟೆಗಾರ - ನೀರಿನಲ್ಲಿ ಮುಳುಗಿ ಮೀನನ್ನು ಬೆನ್ನಟ್ಟಿ ಹಿಡಿಯುವ ಕೆಲ ಹಕ್ಕಿಗಳಲ್ಲೂ ಕಂಡು ಬರುತ್ತದೆ.
- ಗೂಬೆಗಳು ಹಿಡಿದ ಮಿಕವನ್ನು ಇಡಿಯಾಗಿ ನುಂಗುತ್ತವೆ. ಹೊಟ್ಟೆಯಲ್ಲಿ ಜಠರ ರಸ ನುಂಗಿದ ಆಹಾರವನ್ನು ಕರಗಿಸಿ ಜೀರ್ಣ ಮಾಡುತ್ತದೆ. ಕರಗದ ಹಲ್ಲು, ಗರಿ, ತುಪ್ಪಳ, ಮೂಳೆ ಹೊಟ್ಟೆಯ ಒಂದು ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ. ಬಾಯಿಯ ಮೂಲಕ ದಿನಕ್ಕೊಮ್ಮೆಯಾದರೂ ಕರಗದ ಆಹಾರದ ಭಾಗಗಳನ್ನು ಒಗ್ಗೂಡಿಸಿ ದಪ್ಪ ಗುಳಿಗೆಯಂತೆ ಗುಪ್ಪೆ ಮಾಡಿ ಹೊರಹಾಕುತ್ತವೆ. ಹೀಗೆ ಮಾಡಲಿಲ್ಲವಾದರೆ ಗೂಬೆಯ ಜೀವಕ್ಕೆ ಅಪಾಯವಾಗುವವೇ ಸಂಭವ ಹೆಚ್ಚು.
- ಸಾಮಾನ್ಯವಾಗಿ ಮೂರು ಕಾಲ್ಬೆರಳುಗಳು ಮುಂದಕ್ಕೆ ಚಾಚಿದ್ದು, ಒಂದು ಹಿಂದಕ್ಕೆ ತಿರುಗಿರುತ್ತದೆ. ಮಿಕವನ್ನು ಧೃಢವಾಗಿ ಹಿಡಿಯಲು ಅಥವಾ ರೆಂಬೆಯ ಮೇಲೆ ಅಲ್ಲಾಡದೆ ಕುಳಿತಿರಲು ಹೆಬ್ಬೆರಳನ್ನು ಹಿಂದಕ್ಕೆ ತಿರುಗಿಸುವಂತೆ ವಿಕಸನ ಹೊಂದಿವೆ. ಮುಂದೆ ಮತ್ತೆ ಹಿಂದೆ ಎರಡೆರಡು ಬೆರಳಲುಗಳ ಸಹಾಯದಿಂದ ಧೃಢ ಹಿಡಿತ ಸಾಧ್ಯವಾಗಿದೆ.
- ಅತಿ ಒಳ್ಳೆಯ ದೂರದೃಷ್ಟಿ ಹೊಂದಿರುವ ಗೂಬೆಗಳು, ಮಿಕ ತುಂಬಾ ಹತ್ತಿರವಿದ್ದರೆ ಬೇಟೆಯ ವಿಫಲತೆಯೇ ಹೆಚ್ಚು.
- ಗೂಬೆಯ ದರ್ಶನ ಅಥವಾ ಕೂಗು ಅಪಶಕುನವೆಂಬುದಕ್ಕೆ ಅರ್ಥವಿಲ್ಲ. ಬಹುಶಃ ನಿಶಾಚರಿ; ಮನುಷ್ಯರ ಒಡಾಟವಿರದ ಊರ ಹೊರಗಿನ ಪಾಳುಬಿದ್ದ ಒಂಟಿ ಕಟ್ಟಡಗಳು, ಕೋಟೆ, ದೊಡ್ಡ ಮರ, ಕಲ್ಲುಬಂಡೆಗಳ ನಡುವೆ ನಿಗೂಢವಾಗಿ ವಾಸವಿರುವುದರಿಂದಲೋ; ನೀರವ ರಾತ್ರಿಯಲ್ಲಿ ಎದೆ ನಡುಗಿಸುವ ಕೂಗು, ಹಲವೊಮ್ಮೆ ಮನುಷ್ಯನ ಧ್ವನಿಯಂತಿರುವ ಕೂಗಿನಿಂದಾಗಿ ತಪ್ಪು ತಿಳುವಳಿಕೆ ಬಂದಿರಬಹುದು.
- ಕಣ್ಣಿನ ಮೇಲಿನ ರೆಪ್ಪೆ ದೊಡ್ಡದಿದ್ದು, ಗುಂಡು ಮುಖದಲ್ಲಿ ನೇರ ದೃಷ್ಟಿಯ ಮುಂದಿನ ಕಣ್ಣುಗಳು, ಕೊಕ್ಕಿನ ಬುಡದಲ್ಲಿನ ಸಣ್ಣ ಗರಿಗಳು ಮೀಸೆಯಂತಿದ್ದು- ಮನುಷ್ಯನಿಗೆ ಹೋಲಿಕೆಯಾಗುತ್ತದೆ; ಅಲ್ಲದೆ ಕೆಲವು ಗೂಬೆಯ ಕೂಗು ಮಾನವನ ಅರ್ತನಾದಕ್ಕೆ ಸಾಮ್ಯತೆ ಹೊಂದಿದ್ದು, ಜಾನಪದ ಕಥೆಗಳು ಹಾಗೂ ಕಟ್ಟುಕತೆಗಳು ಸೃಷ್ಟಿಯಾಗಿವೆ.
- ಪುರಾತನ ಗ್ರೀಸ್ ನಲ್ಲಿ ವಿವೇಕ, ಬುದ್ದಿವಂತಿಕೆ ಮತ್ತು ಜ್ಞಾನದ ಲಾಂಛನ ಗೂಬೆ. ವಿದ್ಯೆಯ ದೇವತೆ. ನಮ್ಮಲ್ಲೂ ಗೂಬೆಯ ದರ್ಶನ ಶುಭಸಂಕೇತವೆನ್ನುವವರಿದ್ದಾರೆ. ಗೂಬೆಗಳು ಗುಂಪುಗೂಡುವುದು ಅತಿ ವಿರಳ, ಕೂಡಿದರೆ “ಪಾರ್ಲಿಮೆಂಟ್’’ ಎನ್ನುತ್ತಾರೆ.
- ಹಗಲಿನಲ್ಲಿ ಕಣ್ಣು ಕಾಣಿಸುವುದಿಲ್ಲ: ಹಾಲಕ್ಕಿ(Spotted Owlet), ಕಾಡು ಹಾಲಕ್ಕಿ (Jungle Owlet), ಹಾಗೂ ಕಣಜ ಗೂಬೆ (Common Barn Owl) ಗಳು ಹಗಲಿನಲ್ಲೂ ಕೆಲವೊಮ್ಮೆ ಚಟುವಟಿಕೆಯಿಂದಿರುತ್ತವೆ. ಇವುಗಳಲ್ಲದೆ ಬೇರೆ ಪ್ರಭೇದದ ಗೂಬೆಗಳು ಸಹ ಹಗಲಿನಲ್ಲಿ ಸುತ್ತಲಿನ ಆಗುಹೋಗುಗಳನ್ನು ನೋಡುತ್ತಿರುತ್ತವೆ. ನೋಟಕ್ಕಾಗಿ ಹಗಲಿನಲ್ಲಿ ಪ್ರಖರ ಬೆಳಕಿಗೆ ನಮ್ಮ ಕಣ್ಣಿನ ಪಾಪೆ ಕಿರುದಾಗುವ ಅನುಕೂಲವಿದೆ. ಗೂಬೆಗಳೂ ಸಹ ಹೀಗೆಯೇ ಮಾಡುತ್ತವೆ ಅಲ್ಲದೆ ಕೆಲವು ಗೂಬೆಗಳು ಕಣ್ಣ ರೆಪ್ಪೆಯನ್ನು ಎಷ್ಟು ಬೇಕೋ ಅಷ್ಟನ್ನು ಮುಚ್ಚಿ ಕಡಿಮೆ ಬೆಳಕನ್ನು ಕಣ್ಣಿನೊಳಕ್ಕೆ ಹಾಯಿಸಿ ನೋಡುವ ಹೊಂದಾಣಿಕೆ ಮಾಡಿಕೊಂಡಿವೆ. ಹೀಗಾಗಿ, ಗೂಬೆಗಳು ಹಗಲಿನಲ್ಲಿ ನಿದ್ದೆ ಮಾಡುವಂತೆ ಕಂಡರೂ ಎಚ್ಚರದಿಂದಿರುತ್ತವೆ.
- ಕೊಂಬಿನಂತಿರುವ ಗರಿಗಳು ಕಿವಿಗಳಲ್ಲ. ಕೆಲವೊಂದಕ್ಕೆ ಸಾಮಾನ್ಯವಾಗಿ ಇರುತ್ತದೆ. ಮತ್ತೆ ಕೆಲವಕ್ಕೆ ಪ್ರಚೋದನೆಗೊಂಡಾಗ, ಹೆದರಿದಾಗ, ಕೋಪಗೊಂಡಾಗ ಗರಿಗಳನ್ನು ಕೊಂಬಿನಂತೆ ಹೊರಚಾಚಿ ಹೆದರಿಸಲು ಅಥವಾ ತಮಗಿಷ್ಟವಾಗಿಲ್ಲವೆಂದು ತೋರಿಸುತ್ತವೆ.